ಹುಲಿಕೆರೆ
	ಭಾರತದ ಕರ್ನಾಟಕ ರಾಜ್ಯದ ಮಂಡ್ಯ ಜಿಲ್ಲೆ ಮಂಡ್ಯ ತಾಲ್ಲೂಕಿನ ಒಂದು ಗ್ರಾಮ. ಮಂಡ್ಯದ ವಾಯವ್ಯಕ್ಕೆ 18 ಕಿಮೀ ದೂರದಲ್ಲಿ ಮಂಡ್ಯ-ಪಾಂಡವಪುರಗಳ ನಡುವಿನ ಬ್ಯಾಡರಹಳ್ಳಿ ರೈಲ್ವೆ ನಿಲ್ದಾಣದಿಂದ ಸು. 8 ಕಿಮೀ ದೂರದಲ್ಲಿದೆ. 

	ಈ ಸ್ಥಳಕ್ಕೆ ಪ್ರಾಮುಖ್ಯ ಬಂದದ್ದು ಕಾವೇರಿ ನದಿಗೆ ಕನ್ನಂಬಾಡಿಯ ಬಳಿ ಕಟ್ಟೆ ಹಾಕಿ ಕೃಷ್ಣರಾಜಸಾಗರ ಜಲಾಶಯದ ನಿರ್ಮಾಣವಾಗಿ, ಅದರಿಂದ ಇರ್ವಿನ್ ನಾಲಾ (ಈಗ ವಿಶ್ವೇಶ್ವರಯ್ಯ ನಾಲೆ) ಎಡದಂಡೆಯ ಮೇಲ್ಮಟ್ಟದ ಕಾಲುವೆಯನ್ನು ತೋಡಿದ್ದರಿಂದ. ಕಟ್ಟೆಯ ಬಳಿ ನದಿಯ ಸರಾಸರಿ ನೆಲಮಟ್ಟದಿಂದ 18.5 ಮೀ ಎತ್ತರದಲ್ಲಿ ಇಡಲಾಗಿರುವ ತೂಬುಗಳಿಂದ ಪ್ರಾರಂಭವಾಗುವ ಈ ನಾಲೆ ಸು. 40 ಕಿಮೀ ಉದ್ದ ಹಾದುಬರುವಲ್ಲಿ ಲೋಕಪಾವನಿ ಉಪನದಿಯನ್ನು ಎತ್ತರದ ಮೇಲ್ಗಾಲುವೆಯಿಂದ ದಾಟಿದ ಅನಂತರ ಸ್ವಲ್ಪ ದೂರದಲ್ಲಿಯೇ ಲೋಕಪಾವನಿ ಹಾಗೂ ಶಿಂಷಾ ಉಪಜಲಾನಯನಗಳನ್ನು ಪ್ರತ್ಯೇಕಿಸುವ ಬೋರೆಯನ್ನು ಸೀಳಿಕೊಂಡು ಮುಂದುವರಿಯಬೇಕಾಗುತ್ತದೆ. ಕಾವೇರಿ-ಲೋಕಪಾವನಿ ಸಂಗಮದ ಬಳಿ ಕರಿಘಟ್ಟದಿಂದ ಪ್ರಾರಂಭವಾಗುವ ಈ ತಿಟ್ಟಿಗೆ ಕರಿಘಟ್ಟ ಶ್ರೇಣಿ ಎಂದೇ ಹೆಸರು. ಹುಲಿಕೆರೆಯ ಹತ್ತಿರ ಬಂಡೆಯಲ್ಲಿ ಅಗೆದ ನಾಲೆಯ ಆಳ 18 ಮೀಗಿಂತ ಹೆಚ್ಚಾಗಿ, ತೆರೆದ ನಾಲೆ ದುಬಾರಿಯೆನಿಸಿದಾಗ ಮುಂದೆ ಅದನ್ನು ಒಂದು ಸುರಂಗದಲ್ಲಿ ಕೊಂಡೊಯ್ಯಲಾಗಿದೆ. ಇದಕ್ಕೆ ಹುಲಿಕೆರೆ ಸುರಂಗವೆಂದೇ ಹೆಸರು. 

	2,800 ಮೀ ಉದ್ದವಿರುವ ಈ ಸುರಂಗ 3.75 ಮೀ ಅಗಲವೂ 4.5 ಮೀ ಎತ್ತರವೂ ಇದ್ದು ಆಯಾಕಾರವಾಗಿ ಮೇಲೆ ಕಮಾನಿನಂತಿದೆ. ಕೆಳಗಿನ ಮೂಲೆಗಳನ್ನು ಗಾರೆ ಕೆಲಸದಿಂದ ದುಂಡಾಗಿಸಿದೆ. ಸರೇಬಣ ನೇರವಾಗಿದ್ದು ಇದನ್ನು ತೋಡುವಾಗ ಸುರಂಗಮಾರ್ಗದ ನಡುವೆ ಮೂರು ಕಡೆ ನೆಟ್ಟಗಿನ ಬಾವಿ ಕೊಳವೆಗಳನ್ನೂ ಒಂದು ಇಳಿಜಾರು ಕೊಳವೆಯನ್ನೂ ತೆಗೆಯಲಾಗಿದೆ. ಸುರಂಗವನ್ನು ತೋಡುವಾಗ ಸರೇಬಣವನ್ನು ಖಚಿತಗೊಳಿಸಲು ತೋಡಿದ ಕಲ್ಲುಮಣ್ಣನ್ನು ಹೊರಕ್ಕೆ ಎತ್ತಿಹಾಕಲು ಇವು ಉಪಯೋಗಿಸಲ್ಪಟ್ಟಿದ್ದರೆ, ಈಗ ನಡುವಿನ ಇಳಿಜಾರು ಕೊಳವೆ ಕುಡಿಯುವ ನೀರು ಸರಬರಾಜು ಮಾಡುವ ಪಂಪು ಹಾಗೂ ಪೈಪುಗಳಿಗೆ ಸ್ಥಳಾವಕಾಶ ನೀಡಿರುವುದಲ್ಲದೆ, ಮೆಟ್ಟಲು ದೀಪಗಳಿಂದ ಸುರಂಗದ ಪರೀಕ್ಷಣಕ್ಕೂ ಅನುಕೂಲವಾಗಿದೆ. ನೆಲದಾಳದಲ್ಲಿ ಈ ಸುರಂಗ ತೋಡುವಿಕೆಯಿಂದ ಈ ಸ್ಥಳದ ಕುಡಿಯುವ ನೀರಿನ ಬಾವಿಗಳು ಬಸಿದು ಬರಿದಾದ್ದರಿಂದ ಆಗಲೇ ಈ ಸೌಕರ್ಯವನ್ನೊದಗಿಸಲಾಯಿತು. ನಾಲೆಯಿಂದಲೇ ಎತ್ತುನೀರಾವರಿಯ ವಿಶೇಷ ಸವಲತ್ತನ್ನೂ ಈ ಸ್ಥಳಕ್ಕೆ ನೀಡಲಾಗಿದೆ. 1,000 ಮೀಗೆ 2.23 ಮೀ ನಂತೆ ತಳದ ವಾಟ ನೀಡಿರುವ ಈ ಸುರಂಗದಲ್ಲಿ ನೀರು ಹರಿವಿನ ವೇಗ ಘಂಟೆಗೆ 13.6 ಕಿಮೀ (12.38 ಎಫ್‍ಪಿಎಸ್) ಇದ್ದು, ಪ್ರತಿ ಸೆಕೆಂಡಿಗೆ 60 ಘಮೀ (ಕ್ಯೂಮೆಕ್ಸ್ : 2,135 ಕ್ಯೂಸೆಕ್ಸ್) ನೀರನ್ನು ಇದು ಸಾಗಿಸಬಲ್ಲುದಾಗಿದೆ. 1928ರ ಮಧ್ಯಭಾಗದಲ್ಲಿ ಪ್ರಾರಂಭವಾದ ಸುರಂಗದ ಕೆಲಸ 1931ರಲ್ಲಿ ಪೂರ್ತಿಯಾಯಿತು. ಆಗ ಇದಕ್ಕೆ ತಗುಲಿದ ವೆಚ್ಚ ಸು. 20 ಲಕ್ಷ ರೂಪಾಯಿಗಳು. ಎರಡೂ ತುದಿಗಳ ಆಳದಲ್ಲಿಯ ತೆರೆದ ನಾಲೆಯೂ ಸೇರಿದರೆ 46 ಲಕ್ಷ ರೂಪಾಯಿಗಳು. ಇಂಥ ದೊಡ್ಡ ಸಾಹಸ ಈ ಉಪಖಂಡದಲ್ಲಿಯೇ ಆಗ ಪ್ರಥಮ ಎನ್ನಬಹುದು. 

	ಕಾವೇರಿ ನದಿಯಿಂದ ಬಹಳ ಹಿಂದಿನಿಂದಲೂ ಹಲವಾರು ಅಣೆ-ಕಾಲುವೆಗಳಿಂದ ನೀರಾವರಿಗೆ ನೀರು ಪಡೆದಿದ್ದರೂ ಈ ಕಾಲುವೆಗಳೆಲ್ಲ ನದೀಪಾತ್ರದ ಮಗ್ಗುಲಲ್ಲಿಯೇ ಸ್ವಲ್ಪ ಪ್ರದೇಶವನ್ನು ಮಾತ್ರ ನೀರಾವರಿಗೆ ತರುತ್ತಿದ್ದುವು. ವಿಶ್ವೇಶ್ವರಯ್ಯ ನಾಲೆ ಈ ಹುಲಿಕೆರೆ ಸುರಂಗದಿಂದಾಗಿ ನದೀಪಾತ್ರದಿಂದ ಅತಿ ದೂರದಲ್ಲಿ ಉಪಜಲಾನಯನಗಳ ವಿಭಾಜಕ ಶ್ರೇಣಿಯನ್ನು ಭೇದಿಸಿಕೊಂಡು ಶಿಂಷಾ ಜಲಾನಯನವನ್ನು ಪ್ರವೇಶಿಸಿದ್ದ ರಿಂದ, ಮುಂದೆ ಶಾಖೋಪಶಾಖೆಗಳಾಗಿ 88,000 ಹೆಕ್ಟೇರ್ ಪ್ರದೇಶಕ್ಕೆ ನೀರೊದಗಿಸಲು ಸಾಧ್ಯವಾಗಿದೆ. 

	ಯೋಜನೆಯ ಸಮಯದಲ್ಲಿ ಕಲ್ಪಿಸಿದ್ದುದಕ್ಕಿಂತಲೂ ಹೆಚ್ಚಿನ ಪ್ರದೇಶ ಈಗ ನೀರಾವರಿಯಾಗುತ್ತಿದ್ದು, ಆಗ ರೂಪಿಸಿದ್ದ ಬೆಳೆ ನಿಯಂತ್ರಣ ಈಗ ಸಡಿಲಗೊಂಡು ವಿಶ್ವೇಶ್ವರಯ್ಯ ನಾಲಾ ಬಯಲಿನ ತುದಿಗಳಲ್ಲಿಯ ನೀರಿನ ಕೊರತೆಗೆ ಈ ಸುರಂಗವೇ ಮಿತಿಯೊಡ್ಡುತ್ತಿರುವುದಾಗಿ ಭಾವಿಸಲಾಗಿತ್ತು. ಅಲ್ಲದೆ ನದಿಯಿಂದ ಹಿಂದೆ ಬಳಸಲು ಯೋಜಿಸಿದ್ದುದ ಕ್ಕಿಂತಲೂ ಹೆಚ್ಚು ಪ್ರಮಾಣದ ನೀರನ್ನು ಬಳಸಿಕೊಳ್ಳಲೂ ಸಾಧ್ಯವಿದೆ.								
(ಕೆ.ವಿ.ಎಸ್.ಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ